ಈಗೀಗ ವೃದ್ಧಾಪ್ಯ ಎನ್ನುವುದು ಘನತೆಯಿಂದ ಹಾಗೂ ಸಮಾಧಾನದಿಂದ ಕಳೆಯಬೇಕಾಗಿರುವ  ವಯೋಮಾನವಾಗುವ ಬದಲು,  ಆಯುಷ್ಯವನ್ನು ಪ್ರಯತ್ನಪೂರ್ವಕವಾಗಿ ಕಳೆಯುವ ವಯೋಮಾನ ಎನಿಸತೊಡಗಿದೆ.   ವಯಸ್ಸು ಹೆಚ್ಚುತ್ತಾ ಹೋದಂತೆ,  ನಮ್ಮ ಕಳೆದ ಬದುಕಿಗಿಂತ ಮುಂದಿನ ಬದುಕನ್ನು ನಾವು ಹೆಚ್ಚು ಆಶಾವಾದದಿಂದ ನಿರೀಕ್ಷಿಸುತ್ತಿರುತ್ತೇವೆ.  ವೃದ್ಧಾಪ್ಯದಲ್ಲಿನ  ಒಳ್ಳೆಯ ಜೀವನಕ್ಕಾಗಿ  ಚಡಪಡಿಸುತ್ತೇವೆ.  ಆದರೆ ಇದನ್ನು ನಾವು ಸಾಧಿಸುವುದು ಹೇಗೆ? 

image

ಪೋಷಣಾಭರಿತ ಆಹಾರಗಳನ್ನು ಸೇವಿಸಿ, ಅಲ್ಕೋಹಾಲ್‌ ಅನ್ನು ಒಂದು ಮಿತಿಯಲ್ಲಿ ಇರಿಸಿ, ದೈಹಿಕವಾಗಿ ಕ್ರಿಯಾಶೀಲರಾಗಿರುವ ಮೂಲಕ ನಾವಿದನ್ನು ಸಾಧಿಸಬಲ್ಲೆವು.   ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆಗೆ ಸೌಹಾರ್ದಯುತ ಸಂಪರ್ಕದಿಂದ ಇರುವುದು, ಅಗತ್ಯವಿರುವಾಗಲೆಲ್ಲಾ ವೈದ್ಯಕೀಯ ಆರೈಕೆಯನ್ನು ಪಡೆಯುವುದು – ಇವೆಲ್ಲವೂ ಸಹ ವೃದ್ಧಾಪ್ಯದ ಆರೋಗ್ಯಕರ ಮುನ್ನಡೆಯ   ಸಹಜ ಹೆಜ್ಜೆಗಳು.  ಉತ್ತಮ ಆರೋಗ್ಯದಿಂದ ನಾವು ಜೀವನವನ್ನು ಆನಂದಿಸಬಹುದು,  ಹೊಸ ಕನಸುಗಳನ್ನು ಕಾಣಬಹುದು.  ಹೆಚ್ಚುವ ವಯಸ್ಸಿನ ಜತೆ ಜತೆಗೆ ಹೊಸ ಹೊಸ ಗುರಿಗಳನ್ನೂ ಸಹ  ಸಾಧಿಸಬಹುದು. 

ಒಳ್ಳೆಯ ಆರೋಗ್ಯ ಅಂದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಉತ್ತಮ ಸ್ಥಿತಿಯಲ್ಲಿರುವುದು, ಕ್ಷಮತೆಯಿಂದ ಇರುವುದು ಎಂದು ಅರ್ಥ.  ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು, ಒಂದರ ಜೊತೆಗೆ ಒಂದು ಬೆಸೆದು ಸಾಗಬೇಕು.  ಒಂದು ಒಳ್ಳೆಯ ಮನಸ್ಸು, ಒಳ್ಳೆಯ ದೇಹವನ್ನು ನಿರ್ಮಿಸುತ್ತದೆ.  ಮನುಷ್ಯನ ಮನಸ್ಸು ಹೇಗಿರುತ್ತದೋ, ದೇಹವೂ ಹಾಗೆಯೇ ಇರುತ್ತದೆ.  ಸುಸ್ಥಿತಿಯಲ್ಲಿರುವ ರಕ್ತದ ಒತ್ತಡ, ಒಳ್ಳೆಯ ಮಟ್ಟದಲ್ಲಿರುವ ರಕ್ತದ ಕೊಲೆಸ್ಟ್ರಾಲ್‌ ಅಂಶ, ಪೋಷಣಾ ಭರಿತ ಆಹಾರ, ಒಳ್ಳೆಯ ದೇಹತೂಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಿರುವುದು –  ಇವೆಲ್ಲವೂ ಸಹ ಒಂದು ಒಳ್ಳೆಯ ದೇಹ ನಿರ್ಮಾಣದ ಪೂರಕ ಅಂಶಗಳು.

ನಮ್ಮ ದೇಹವನ್ನು ಆರೋಗ್ಯಶಾಲಿಯಾಗಿರಿ ಸಲು, ವೈಕಲ್ಯಗಳು ಮತ್ತು ರೋಗಗಳಿಂದ ಮುಕ್ತವಾಗಿರಿಸಲು ಜೀವನಶೈಲಿಯಲ್ಲಿ ಅನೇಕ ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಆದರೆ ನಮ್ಮ ಮನಸ್ಸಿನ  ಆರೋಗ್ಯಕ್ಕಾಗಿ  ನಾವು ಕೆಲವು  ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಾಗುವುದು.

ನನ್ನ ಮನಸ್ಸನ್ನು ಆರೋಗ್ಯಕರವಾಗಿ
ಇರಿಸಿಕೊಳ್ಳಲು ನಾನು ಏನು
ಮಾಡಬಹುದು?

ಕಳೆದ ಕೆಲವು ವರ್ಷಗಳಿಂದ ಆಗಿರುವ  ಹಲವಾರು ಸಂಶೋಧನೆಗಳು, ನಮ್ಮ ಮನಸ್ಸನ್ನು ಆರೋಗ್ಯಶಾಲಿಯಾಗಿ  ಇರಿಸಿಕೊಳ್ಳುವ ವಿವಿಧ ವಿಧಾನಗಳನ್ನು   ತೋರಿಸಿಕೊಟ್ಟಿವೆ. ನಮ್ಮ ದೇಹವನ್ನು ಆರೋಗ್ಯಶಾಲಿಯಾಗಿ ಇರಿಸಲು ನಾವು ಮಾಡುವ ಪ್ರಯತ್ನಗಳು – ಅಂದರೆ   ದೈಹಿಕ ಚಟುವಟಿಕೆಗಳು ಮತ್ತು ಉತ್ತಮ ಆಹಾರಾಭ್ಯಾಸಗಳು, ಕೊಲೆಸ್ಟ್ರಾಲ್‌ ಮಟ್ಟ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗುವುದಷ್ಟೇ ಅಲ್ಲದೆ, ಮನಸ್ಸನ್ನೂ ಸಹ ಆರೋಗ್ಯಕರವಾಗಿರಿಸಲು ಸಹಾಯಮಾಡುತ್ತವೆ.  ಜತೆಗೆ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸುವಂತಹ ಕಾರ್ಯಗಳಲ್ಲಿ ತೊಡಗುವುದರಿಂದ- ಅಂದರೆ ಪದಬಂಧ ಬಿಡಿಸುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಬರವಣಿಗೆ ಮತ್ತು ಹೊಸ ವಿಚಾರಗಳ ಕಲಿಕೆಯಂತಹ ಸಂಗತಿಗಳು ನಮ್ಮ ಮೆದುಳನ್ನು  ಕ್ರಿಯಾಶೀಲವಾಗಿರಿಸುವಲ್ಲಿ ಸಹಾಯ ಮಾಡುತ್ತವೆ.  ನಮ್ಮ ಸುತ್ತ ಮುತ್ತಲೂ ಇರುವ ಜನರ ಜೊತೆ, ಸಮುದಾಯದ ಜತೆಗೆ ಇರಿಸಿಕೊಳ್ಳುವ ಉತ್ತಮ ಸಂವಹನ, ಸಂಪರ್ಕಗಳು  ನಾವು ಮಾನಸಿಕವಾಗಿ ಕ್ಷಮತೆಯಿಂದ ಇರಲು ನೆರವಾಗುತ್ತವೆ.
ನಾವು ಮಾನಸಿಕವಾಗಿ ಕ್ಷಮತೆಯಿಂದ ಇರಲು ಮತ್ತು  ಮಾನಸಿಕ ಸಮಸ್ಯೆಗಳನ್ನು ದೂರವಿರಿಸಲು ಇಲ್ಲಿವೆ ಕೆಲವು ಸಹಾಯಕ ಸಲಹೆಗಳು:

ದೈಹಿಕವಾಗಿ ಕ್ರಿಯಾಶೀಲರಾಗಿರಿ:

ದೈಹಿಕವಾಗಿ ಕ್ರಿಯಾಶೀಲರಾಗಿರುವುದರಿಂದ ಹಲವು ಪ್ರಯೋಜನಗಳಿವೆ. ದೈಹಿಕವಾಗಿ ಚಟುವಟಿಕೆಯಿಂದ ಇರುವುದರಿಂದ, ಮೂಳೆಯ ಸಾಂದ್ರತೆ ನಷ್ಟವಾಗುವುದನ್ನು ತಪ್ಪಿಸಬಹುದು, ದೇಹದ ಸಂತುಲನೆಯನ್ನು ಕಾಪಾಡಿಕೊಳ್ಳಬಹುದು.  ಕೆಲವು ಕಾಯಿಲೆಗಳನ್ನು ದೂರವಿರಿಸಬಹುದು (ಉದಾ. ಹೃದಯದ ಕಾಯಿಲೆಗಳು, ಲಕ್ವಾ ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳು).  ಕೆಲವು ಕಾಯಿಲೆಗಳು ಮತ್ತು ವೈಕಲ್ಯಗಳು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗಲು ಪ್ರೇರಣೆ ನೀಡುತ್ತವೆ.  ಉದಾಹರಣೆಗೆ ಹೇಳುವುದಾದರೆ, ಮಧುಮೇಹ, ಕ್ಯಾನ್ಸರ್‌ ಮತ್ತು ಹೃದಯದ ಕಾಯಿಲೆಗಳಿಂದ ಬಳಲುತ್ತಿರುವವರು ಖನ್ನತೆಯಿಂದಲೂ ಸಹ ಬಳಲುತ್ತಿರುತ್ತಾರೆ.

ನಿತ್ಯದ ದೈಹಿಕ ಚಟುವಟಿಕೆಗಳು
ಹೀಗೆ ನೆರವಾಗುತ್ತವೆ:

  ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮಪಡಿಸಿಕೊಳ್ಳಲು.

 ಮಾನಸಿಕ ಸಾಮರ್ಥ್ಯವನ್ನು  ಕಾಪಾಡಿ ಕೊಳ್ಳಲು ಮತ್ತು ಉತ್ತಮ ಪಡಿಸಿಕೊಳ್ಳಲು.

  ಅಲಿlಮರ್ಸ್‌ ಕಾಯಿಲೆಯೂ ಸೇರಿದಂತೆ ನೆನಪಿನ ಶಕ್ತಿ ಕುಂದುವುದನ್ನು ತಡೆಯಲು.

 ಖನ್ನತೆಯಿಂದ ಹೊರಬರಲು, ಖನ್ನತೆಯನ್ನು ತಡೆಯಲು ಮತ್ತು ಆನಂದದಿಂದ ಇರಲು.

 ದೇಹದ ಸಾಮರ್ಥ್ಯವನ್ನು ಉತ್ತಮ ಪಡಿಸಿಕೊಳ್ಳಲು.

ಈಗ ನೀವು  ವ್ಯಾಯಾಮ ಯೋಜನೆಯನ್ನು ಆರಂಭಿಸಲು ಯೋಚಿಸುತ್ತಿರುವಿರಾದರೆ, ಮೊದಲು ನಿಮ್ಮ ವೈದ್ಯರ ಜೊತೆಗೆ ಮಾತನಾಡಿ.  ನಿಧಾನವಾಗಿ ವ್ಯಾಯಾಮ ಆರಂಭಿಸಿ,  ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ (ಉದಾ: ಒಳ್ಳೆಯ ಬೆಳಕಿರುವಲ್ಲಿ , ದೃಢವಾದ ಶೂ ಧರಿಸಿ ನಡೆಯುವುದು) ಮತ್ತು ವ್ಯಾಯಾಮವನ್ನು  ಆನಂದಿಸಿ. ಆದರೆ ನೆನಪಿಡಿ,  ನೀವು ನಿತ್ಯವೂ ವ್ಯಾಯಾಮ ಮಾಡಲು  ಕ್ರೀಡಾಪಟುವೇ ಆಗಬೇಕೆಂದೇನೂ  ಇಲ್ಲ.

ನಿಮ್ಮ ರಕ್ತದ ಒತ್ತಡವನ್ನು
ಸಮಸ್ಥಿತಿಯಲ್ಲಿಡಿ:

ರಕ್ತದ ಒತ್ತಡವು 120/80 ಞಞಏಜ ಗಿಂತ ಕೆಳಗಿದ್ದರೆ, ಅದನ್ನು ಆರೋಗ್ಯಕರ ಅಥವಾ ಸಮಸ್ಥಿತಿಯ ರಕ್ತದ ಒತ್ತಡ ಎಂದು ಪರಿಗಣಿಸಲಾಗುವುದು. ಸಮಸ್ಥಿತಿಯಲ್ಲಿರುವ ರಕ್ತದ ಒತ್ತಡವು ಲಕ್ವಾ ಮತ್ತು ಅಲಿlಮರ್ಸ್‌ ಕಾಯಿಲೆಯೂ ಸೇರಿದಂತೆ,  ಡಿಮೆನ್ಷಿಯಾ ಅಂದರೆ ನೆನಪಿನ ಶಕ್ತಿ ಕಡಿಮೆಯಾಗುವುದನ್ನು ತಡೆಯುವಲ್ಲಿ ನೆರವಾಗುತ್ತದೆ.  ಅಧಿಕ ರಕ್ತದ ಒತ್ತಡವು, ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ.  ಈ ಕಾರಣದಿಂದ ಲಕ್ವಾ, ಮೂತ್ರಪಿಂಡ ವೈಫಲ್ಯ, ಹೃದಯದ ಕಾಯಿಲೆಗಳು, ಹೃದಯಾಘಾತದ ಅಪಾಯಗಳು ಹೆಚ್ಚಾಗುತ್ತವೆ.  65 ವರ್ಷ ಪ್ರಾಯ ಮೀರಿದ ಸುಮಾರು ಮೂರನೇ ಎರಡು ಭಾಗದಷ್ಟು ವಯಸ್ಕರಿಗೆ 120/80 ಞಞಏಜಗೂ ಅಧಿಕ ರಕ್ತದ ಒತ್ತಡ ಇರುತ್ತದೆ.  ಯಾರ ರಕ್ತದ ಒತ್ತಡವು  120/80 ಞಞಏಜ  ಮತ್ತು  139/89 ಞಞಏಜ ನಡುವೆ ಇರುವುದೋ ಅವರನ್ನು ಅಧಿಕ ರಕ್ತದ ಒತ್ತಡ ಪೂರ್ವ ಹಂತದಲ್ಲಿರುವವರು ಎಂದು ಪರಿಗಣಿಸಲಾಗುವುದು. ಅವರ ರಕ್ತದ ಒತ್ತಡವು ಅಧಿಕವಿಲ್ಲದಿದ್ದರೂ ಸಹ, ಭವಿಷ್ಯದಲ್ಲಿ ಅವರಿಗೆ ಅಧಿಕ ರಕ್ತದ ಒತ್ತಡವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.  ರಕ್ತದ ಒತ್ತಡವನ್ನು ಇಳಿಸಬೇಕೆಂದಿದ್ದರೆ ಅಥವಾ ಸಮಸ್ಥಿತಿಯಲ್ಲಿ ಇರಿಸಿಕೊಳ್ಳಬೇಕೆಂದಿದ್ದರೆ, ನಿಮ್ಮ ದೇಹದ ತೂಕವನ್ನು ಇಳಿಸಿ,  ಧೂಮಪಾನ ಮಾಡಬೇಡಿ, ನಿತ್ಯವೂ ವ್ಯಾಯಾಮ ಮಾಡಿ, ಒಳ್ಳೆಯ ಆರೋಗ್ಯಕರ ಆಹಾರವನ್ನು ಸೇವಿಸಿ, ಉಪ್ಪು$, ಆಲ್ಕೋಹಾಲ್‌ ಮತ್ತು ಕೆಫಿನ್‌ಯುಕ್ತ ಪಾನೀಯಗಳನ್ನು ಮಿತವಾಗಿ ಸೇವಿಸಿ.  

ನಿಮ್ಮ ಕೊಲೆಸ್ಟ್ರಾಲ್‌ ಮಟ್ಟ ಇಳಿಸಿಕೊಳ್ಳಿ:

ದೇಹದ ಕೊಲೆಸ್ಟ್ರಾಲ್‌ ಮಟ್ಟವು ಹೆಚ್ಚುವುದರಿಂದ ಹೃದಯದ ಕಾಯಿಲೆ ಹಾಗೂ ಡಿಮೆನ್ಷಿಯಾ ಅಂದರೆ ಬುದ್ಧಿಮಾಂದ್ಯತೆಯುಂಟಾಗುವ ಅಪಾಯಗಳಿವೆ.  ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್‌ ಮಟ್ಟವು ಹೆಚ್ಚಾಗಿದ್ದರೆ, ನಿಮಗೆ ಕಾಯಿಲೆ ಅಥವಾ ಅಸ್ವಸ್ಥತೆಗಳುಂಟಾಗುವ ಸಾಧ್ಯತೆಗಳೂ ಹೆಚ್ಚು.  ನಿಮ್ಮ ರಕ್ತದಲ್ಲಿರುವ ಅಧಿಕ ಕೊಲೆಸ್ಟ್ರಾಲ್‌ ಅಂಶವು (ಕೊಬ್ಬಿನಂತಹ ಅಂಶ) ನಿಮ್ಮ ರಕ್ತನಾಳದ ಒಳಗೋಡೆಗಳಲ್ಲಿ ಸಂಗ್ರಹಗೊಳ್ಳುತ್ತದೆ.  ಇದರಿಂದಾಗಿ ರಕ್ತನಾಳಗಳು ಬಿರುಸಾಗುತ್ತವೆ ಮತ್ತು ಸಪೂರವಾಗುತ್ತವೆ. ಈ ಕಾರಣದಿಂದ ರಕ್ತ ಪರಿಚಲನೆ ನಿಧಾನವಾಗುತ್ತದೆ ಅಥವಾ ಪರಿಚಲನೆಗೆ ಅಡಚಣೆ ಉಂಟಾಗಲೂಬಹುದು.  ಆನುವಂಶಿಕತೆ, ಪ್ರಾಯ ಮತ್ತು ಲಿಂಗ – ಇವೆಲ್ಲವೂ ಸಹ ಕೊಲೆಸ್ಟ್ರಾಲ್‌ ಮಟ್ಟದ ಮೇಲೆ ಪ್ರಭಾವ ಬೀರುವ ಅಂಶಗಳು.  ವಯಸ್ಸು ಹೆಚ್ಚಾದಂತೆ ವ್ಯಕ್ತಿಯ ಕೊಲೆಸ್ಟ್ರಾಲ್‌ ಮಟ್ಟವೂ ಸಹ ಹೆಚ್ಚಾಗುತ್ತದೆ. ಮಹಿಳೆಯರಲ್ಲಿ ಋತುಬಂಧದ  ಆರಂಭದಿಂದ ಕೊಲೆಸ್ಟ್ರಾಲ್‌ ಮಟ್ಟವು ಏರಲು ಆರಂಭವಾಗುತ್ತದೆ.  ಆಹಾರಾಭ್ಯಾಸಗಳು, ದೇಹದ ತೂಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆರೋಗ್ಯಕರ ಬದಲಾವಣೆ ಮಾಡಿಕೊಳ್ಳುವ ಮೂಲಕ ರಕ್ತದ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಯಥೇತ್ಛವಾಗಿ ತರಕಾರಿಗಳನ್ನು ಸೇವಿಸಿ:

ತರಕಾರಿ ಸೇವನೆ ಒಳ್ಳೆಯದು ಎಂಬ ಸಲಹೆಯನ್ನು  ನಾವು  ಜೀವನದ ಉದ್ದಕ್ಕೂ ಕೇಳುತ್ತಿರುತ್ತೇವೆ.  ತರಕಾರಿ ಸೇವನೆಯು ನಾವು ಕ್ಷಮತೆಯಿಂದ ಮತ್ತು ಆರೋಗ್ಯಶಾಲಿಯಾಗಿರಲು ನೆರವಾಗುತ್ತದೆ. ತರಕಾರಿಗಳು ಉತ್ತಮ ಆರೋಗ್ಯಕ್ಕೆ  ಮತ್ತು ಆರೋಗ್ಯಶಾಲಿ ಮೆದುಳಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುತ್ತವೆ. 

ಆರೋಗ್ಯಶಾಲಿ ಮೆದುಳಿಗಾಗಿ ಕೆಲವು
ವಿಶಿಷ್ಟ  ಆಹಾರ ಸಲಹೆಗಳು:

ಫೋಲೇಟ್‌ ಎಂಬುದು ಬಸಳೆ ಮತ್ತು ಹರಿವೆಗಳಲ್ಲಿ ದೊರಕುವ ಒಂದು ರೀತಿಯ ವಿಟಾಮಿನ್‌.  ಬಿ. ಪೂರಣಗಳಲ್ಲಿ ಮತ್ತು ಪೌಷ್ಟಿಕ ಆಹಾರಗಳಲ್ಲಿ ಫೋಲಿಕ್‌ ಆಸಿಡ್‌ ಅನ್ನು ಸಿಂಥೆಟಿಕ್‌ ರೂಪದಲ್ಲಿ ಬಳಸುತ್ತಾರೆ. ನಮ್ಮ ಜೀವಕೋಶಗಳ ಆರೋಗ್ಯಕ್ಕೆ ಫೋಲೆಟ್‌ ಆವಶ್ಯಕ. ಇದು ರಕ್ತಹೀನತೆಯನ್ನು ತಡೆಯಲು ಮತ್ತು ಕ್ಯಾನ್ಸರ್‌ ಉಂಟುಮಾಡಬಹುದಾದ ಡಿಎನ್‌ಎ (ಜೀವಕೋಶಗಳ ಘಟಕಗಳು) ವ್ಯತ್ಯಾಸವನ್ನು ತಡೆಯಲು ನೆರವಾಗುತ್ತದೆ.  ಫೋಲೆಟ್‌ ಮತ್ತು ಫೋಲಿಕ್‌ ಆಸಿಡ್‌ಗಳ ಉತ್ತಮ ಮೂಲಗಳು ಅಂದರೆ ಬೇಳೆ ಕಾಳುಗಳು,  ಪೌಷ್ಟಿಕ ಉಪಾಹಾರಗಳು, ದಟ್ಟ-ಹಸಿರು ಬಣ್ಣದ ಸೊಪ್ಪು$ ತರಕಾರಿಗಳು, ಹರಿವೆಸೊಪ್ಪು$, ಸ್ಟ್ರಾಬೆರಿಗಳು, ಅವರೆಕಾಳು ಮತ್ತು ಬೀಫ್‌ ಲಿವರ್‌.  

ವಿಟಾಮಿನ್‌ ಇ ಮತ್ತು ಸಿಗಳು ಆಹಾರದಲ್ಲಿ ದೊರಕುವ ಬಹು ಮುಖ್ಯ ಆಂಟಿಆಕ್ಸಿಡಾಂಟ್‌ಗಳಾಗಿದ್ದು, ಇವು ಜೀವಕೋಶಗಳಿಗೆ ಹಾನಿಯಾ ಗುವುದರ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಮತ್ತು ಕ್ಯಾನ್ಸರ್‌ ಹಾಗೂ ಹೃದಯದ ಕಾಯಿಲೆಯ ಅಪಾಯವನ್ನು ತಗ್ಗಿಸುತ್ತವೆ. 

ಧೂಮಪಾನವನ್ನು ಬಿಟ್ಟು ಬಿಡಿ: 

ನೀವು ಧೂಮಪಾನ ಮಾಡುತ್ತಿರುವಿರಾದರೆ, ಅದನ್ನು ಬಿಟ್ಟು ಬಿಡುವುದಕ್ಕಾಗಿ ಗಂಭೀರ ಕಾಯಿಲೆಯೊಂದಕ್ಕೆ  ತುತ್ತಾಗುವುದನ್ನು ಕಾಯುತ್ತಾ ಕೂರಬೇಡಿ.  ಧೂಮಪಾನದಿಂದ ಒಬ್ಬ ವ್ಯಕ್ತಿಯು ಲಕ್ವಾ ಮತ್ತು ಶ್ವಾಸ ಕೋಶ ಹಾಗೂ ಇತರ ಕ್ಯಾನ್ಸರ್‌, ಎಂಫೈಸೆಮಾ, ದೀರ್ಘ‌ಕಾಲಿಕ ಶ್ವಾಸಕೋಶದ ಉರಿಯೂತ, ಶ್ವಾಸಕೋಶದ ದೀರ್ಘ‌ಕಾಲಿಕ ಅಡಚಣೆಯ ಕಾಯಿಲೆಗಳಿಗೆ, ಹೃದಯಾಘಾತ ಮತ್ತು ಹೊರಎಲ್ಲೆಯ ರಕ್ತನಾಳಗಳ ಕಾಯಿಲೆಗೆ ತುತ್ತಾಗುವ  ಸಾಧ್ಯತೆಗಳು ಹೆಚ್ಚಾಗುತ್ತವೆ. 

ಉತ್ತಮ ದೇಹ ತೂಕ ಕಾಪಾಡಿಕೊಳ್ಳಿ:

 ಬೊಜ್ಜು ದೇಹಿಗಳಾದ ಜನರು ಅಥವಾ ಹೆಚ್ಚು ದೇಹತೂಕ ಹೊಂದಿರುವ ಜನರಿಗೆ ಹೃದಯಾಘಾತ, ಅಧಿಕ ರಕ್ತದ ಒತ್ತಡ, ಡಯಾಬೆಟೆಸ್‌, ಸಂಧಿವಾತಕ್ಕೆ  ಸಂಬಂಧಿಸಿದ ವೈಕಲ್ಯಗಳು ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳು ಬರುವ ಸಾಧ್ಯತೆಗಳು ಹೆಚ್ಚು.  ಅಧಿಕ ತೂಕದಿಂದಾಗಿ ಆರೋಗ್ಯಕ್ಕೆ ಅಪಾಯಕಾರಿಯಾದ – ಅಧಿಕ ರಕ್ತದ ಒತ್ತಡ, ಅಧಿಕ ಕೊಲೆಸ್ಟ್ರಾಲ್‌, ಹೃದಯದ ಕಾಯಿಲೆಗಳು ಮತ್ತು ಲಕ್ವಾದಂತಹ ಸನ್ನಿವೇಶಗಳು ಬರಬಹುದು.  ದೇಹದ ತೂಕವು ತೀರಾ ಕಡಿಮೆ ಇರುವುದೂ ಒಳ್ಳೆಯದಲ್ಲ.  ಹೀಗಾದರೆ, ದೇಹದ ರೋಗಪ್ರತಿರೋಧಕತೆ ಕಡಿಮೆಯಾಗುವ ಮತ್ತು ನೆನಪಿನ ಶಕ್ತಿ ಕಡಿಮೆಯಾಗುವ ಅಪಾಯವಿದೆ.  ನಿಮ್ಮ ದೇಹದ ತೂಕ ಎಷ್ಟಿರಬೇಕು ಎಂಬ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆಯನ್ನು ಪಡೆಯಿರಿ ಮತ್ತು ಸರಿಯಾದ ದೇಹ ತೂಕವನ್ನು ಕಾಪಾಡಿಕೊಂಡು ಬರಲು ಪ್ರಯತ್ನಿಸಿ.  ನಿಮ್ಮ ದೇಹದ ತೂಕ ಏನೇ ಆಗಿದ್ದರೂ ಸಹ, ಒಳ್ಳೆಯ ಆಹಾರ ಮತ್ತು ನಿಯಮಿತ ವ್ಯಾಯಾಮಗಳಿಂದಷ್ಟೇ ನೀವು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುವುದು. 

ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸಿ:

ಬ್ರಷಿಂಗ್‌, ಫ್ಲಾಸಿಂಗ್‌ ನಿಯಮಿತವಾಗಿ ಮಾಡಿ ಮತ್ತು ನಿಮ್ಮ ದಂತ ವೈದ್ಯರನ್ನು  ನಿಯಮಿತವಾಗಿ ಭೇಟಿ ಮಾಡಿ.  ಒಸಡುಗಳ ದೀರ್ಘ‌ಕಾಲಿಕ  ಕಾಯಿಲೆಗೂ, ಅಲಿlಮರ್ಸ್‌ ಕಾಯಿಲೆಯೂ ಸೇರಿದಂತೆ  ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಸಂಬಂಧವಿರುವುದು ಇತ್ತೀಚಿನ ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ.  ಪ್ರಸನ್ನ ನಗೆಯನ್ನು  ಬೀರಲು ಮತ್ತು ನಿಮ್ಮ ಇಷ್ಟದ ತಿನಿಸುಗಳನ್ನು ತಿನ್ನಲಷ್ಟೇ ಅಲ್ಲ, ಕಾಯಿಲೆಗಳನ್ನು ದೂರವಿರಿಸಲೂ ಸಹ ನೀವು ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ. 

ಮಾನಸಿಕ ಆರೋಗ್ಯವನ್ನು
ಕಾಪಾಡಿಕೊಳ್ಳಿ:

ನಾವು ನಮ್ಮ ದೇಹವು ಚಟುವಟಿಕೆಯಿಂದ  ಇರಲು ಸಹಾಯವಾಗಲು  ವ್ಯಾಯಾಮದಲ್ಲಿ ತೊಡಗುವಂತೆ, ನಮ್ಮ ಮನಸ್ಸು ಅಥವಾ ಬುದ್ಧಿಯೂ ಸಹ ಕ್ಷಮತೆಯಿಂದ ಇರುವಂತೆ ಮಾಡಲು ಮಾನಸಿಕ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು.    ಮನಸ್ಸನ್ನು ಸ್ಫೂರ್ತಿ ದಾಯಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ , ನಮಗೆ ವಯಸ್ಸು ಹೆಚ್ಚುತಿದ್ದರೂ ಸಹ, ನಮ್ಮ ಮೆದುಳಿನ ಚಟುವಟಿಕೆಗಳನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು.  ಹೊಸ ವಿಷಯಗಳನ್ನು ಕಲಿಯುವುದರಿಂದ ಲಕ್ಷಾಂತರ ಮೆದುಳಿನ ಕೋಶಗಳನ್ನು ಸಕ್ರಿಯವಾಗಿರಿಸಬಹುದು.  ಈ ಚಟುವಟಿಕೆಗಳು ಅಲಿlಮರ್ಸ್‌ ಕಾಯಿಲೆಯಂತಹ ಡಿಮೆನ್ಷಿಯಾ ಅಂದರೆ ನೆನಪಿನ ಶಕ್ತಿ ಕಡಿಮೆಯಾಗುವುದನ್ನು  ತಡೆಗಟ್ಟಲು ನೆರವಾಗುತ್ತವೆ. ಪದಬಂಧಗಳನ್ನು ಬಿಡಿಸಿ, ಹೊಸ ಸಂಗೀತ ವಾದ್ಯವನ್ನು ಕಲಿಯಿರಿ,  ಸವಾಲೆನಿಸುವಂತಹ ಪುಸ್ತಕಗಳನ್ನು ಓದಿ, ಬೋರ್ಡ್‌ ಅಥವಾ ಕಾರ್ಡ್‌ ಆಟದಲ್ಲಿ ತೊಡಗಿ, ಭಾಷಣ ಕೇಳುವ ಅಥವಾ ನಾಟಕ ನೋಡುವ ಹವ್ಯಾಸ ಬೆಳೆಸಿಕೊಳ್ಳಿ , ಸಣ್ಣ , ಸಣ್ಣ  ಕಥೆಗಳನ್ನು ಬರೆಯಿರಿ – ಈ ಮೂಲಕ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:

ಒತ್ತಡವು ನಮ್ಮ ದೇಹವನ್ನು ಕುಸಿಯುವಂತೆ ಮಾಡಿ,  ಹೃದಯದ ಕಾಯಿಲೆ ಮತ್ತು ರಕ್ತದ ಒತ್ತಡಗಳ‌ ಅಪಾಯವನ್ನು ಹೆಚ್ಚಿಸುತ್ತದೆ.  ಮಾತ್ರವಲ್ಲ, ಇದು ನಮ್ಮ ಆಲೋಚನೆ, ಮನಸ್ಥಿತಿ ಮತ್ತು ನಮ್ಮ ನೆನಪಿನ ಶಕ್ತಿಗಳ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ.  ವಾಸ್ತವವಾಗಿ ನಾವು ಒತ್ತಡದಲ್ಲಿ ಇರುವಾಗ, ದೇಹದಲ್ಲಿ ಸ್ರವಿಸುವ ಹಾರ್ಮೋನ್‌ಗಳು ಮೆದುಳನ್ನು ಕುಗ್ಗುವಂತೆ ಮಾಡುತ್ತವೆ.  ಇದರಿಂದ ನೆನಪಿನ ಶಕ್ತಿ ಮತ್ತು ಕಲಿಯುವಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ.  ಒತ್ತಡದಿಂದಾಗಿ ಖನ್ನತೆ ಮತ್ತು ಆತಂಕಗಳೂ ಸಹ ಉಂಟಾಗುತ್ತವೆ.    

 ಒತ್ತಡವನ್ನು ಕಡಿಮೆ ಮಾಡಿ ಕೊಳ್ಳಲು, ಒತ್ತಡಕ್ಕೆ ಕಾರಣವಾಗಿರುವ ಅಂಶವನ್ನು ಮೊದಲು ಗುರುತಿಸಿ, ಇದನ್ನು ಹೋಗಲಾಡಿಸಲು ನೀವು ಏನು ಮಾಡಬಹುದು ಎಂಬುದನ್ನು   ಗಮನಿಸಿ. ಉದಾಹರಣೆಗೆ , ಒಂದು ವೇಳೆ ಜನದಟ್ಟಣೆಯ ಟ್ರಾಫಿಕ್‌ ನಿಮ್ಮಲ್ಲಿ ಒತ್ತಡವನ್ನು ಉಂಟು ಮಾಡುತ್ತಿದ್ದರೆ, ನಿಮ್ಮ ಡ್ರೆ„ವಿಂಗ್‌ ಸಮಯವನ್ನು ಅಥವಾ ಮಾರ್ಗ ವನ್ನು ಬದಲಾಯಿಸಿಕೊಳ್ಳಿ ಮತ್ತು ಟ್ರಾಫಿಕ್‌ನ ದಟ್ಟಣೆಯಿಂದ ತಪ್ಪಿಸಿ ಕೊಳ್ಳಿ.  ರಜಾದಿನಗಳಲ್ಲಿ ಪಾರ್ಟಿ ಯನ್ನು ಯೋಜಿಸುವ ಅಥವಾ ಉಡುಗೊರೆಗಳನ್ನು ಖರೀದಿಸುವ ವಿಚಾರವು ನಿಮಗೆ ಒತ್ತಡವನ್ನು ಉಂಟು ಮಾಡುತ್ತಿದ್ದರೆ, ಆ ವಿಚಾರವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಡಿ, ಅಥವಾ ಆ ವಿಚಾರವನ್ನು ಸರಳಗೊಳಿಸಿ ಕೊಳ್ಳಿ, ಅಂದರೆ ನಿಮಲ್ಲಿ ಒತ್ತಡವನ್ನು ಉಂಟು ಮಾಡುತ್ತಿರುವ ವಿಚಾರ ವನ್ನು ಬಗೆಹರಿಸಿಕೊಳ್ಳಲು, ನಿಮ್ಮ ಸ್ನೇಹಿತರು,ಕುಟುಂಬದವರ ಸಹಾಯ ಪಡೆಯಿರಿ. 

 ಮನಬಿಚ್ಚಿ  ಮಾತನಾಡಿ.  ಕೆಲವು ಸಲ ಇನ್ನೊಬ್ಬರ ಜತೆ ಮಾತ ನಾಡುವುದರಿಂದ, ಒತ್ತಡ ಉಂಟು ಮಾಡುವ ವಿಚಾರವನ್ನು ಸ್ನೇಹಿತರು ಅಥವಾ ಚಿಕಿತ್ಸಕರ ಜೊತೆಗೆ ಹಂಚಿ ಕೊಳ್ಳುವುದರಿಂದ, ಅಥವಾ ಬರೆಯುವುದರಿಂದ ಆ ಒತ್ತಡದಿಂದ ಹೊರಬರಲು ಸಹಾಯವಾಗುತ್ತದೆ. ಹೀಗೆ ಮಾಡುವುದರಿಂದ ವಿಚಾರಗಳು ಇನ್ನಷ್ಟು  ಸ್ಪಷ್ಟಗೊಳ್ಳುತ್ತವೆ. ವಿರಮಿಸಿ ಕೊಳ್ಳಿ.  ನಡಿಗೆ, ಗಾಲ್ಫ್ ಆಟ, ಟೆನ್ನಿಸ್‌ ಬಾಲ್‌ ಎಸೆತ ಅಥವಾ ಧ್ಯಾನ… ಇತ್ಯಾದಿಗಳ ಮೂಲಕ ನಿಮ್ಮ ಒತ್ತಡ ವನ್ನು ಹೊರಹಾಕಿ, ಒಂದು ಬ್ರೇಕ್‌ ತೆಗೆದುಕೊಳ್ಳಿ.

 ಸದಾ ಕ್ರಿಯಾಶೀಲರಾಗಿರಿ.  ವಾರದ ಅನೇಕ  ದಿನಗಳಲ್ಲಿ ಕ್ರಿಯಾಶೀಲರಾಗಿ ಇರುವುದರಿಂದ ನಮ್ಮ ದೇಹ, ಮನಸ್ಸುಗಳ  ಒತ್ತಡವನ್ನು ಸಮಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಹಾಯವಾಗುತ್ತದೆ.

  ನಿಮಗೆ ನೀವೆ ಒಂದು ಬ್ರೇಕ್‌ ಕೊಟ್ಟುಕೊಳ್ಳಿ.  ನೀವು ಒತ್ತಡದಾಯಕ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರೆ,  ಅಲ್ಪಾವಧಿಯ ರಜೆ  ತೆಗೆದುಕೊಳ್ಳಿ,  ವಿಶ್ರಾಂತಿಗಾಗಿ ಸಮಯವನ್ನು ತೆಗೆದು ಕೊಳ್ಳಿ. ಅದು 20 ನಿಮಿಷವೇ ಆಗಿರಬಹುದು, ಅಥವಾ ಕೆಲವು ದಿನ ಗಳೇ ಆಗಿರಬಹುದು, ನಿಮಗೆ ಖುಷಿ  ನೀಡುವ ವ್ಯಕ್ತಿ, ವಸ್ತು, ವಿಷಯಗಳಿಂದ ಆನಂದವನ್ನು ಪಡೆಯಿರಿ.

ನಿಮ್ಮ ಮೆದುಳನ್ನು ರಕ್ಷಿಸಿಕೊಳ್ಳಿ:

ತಲೆಗೆ ಏಟಾಗುವುದು ಅಥವಾ ಪ್ರಜ್ಞೆ ತಪ್ಪುವುದು… ಇತ್ಯಾದಿಗಳು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತವೆ.  ಬೀಳುವಿಕೆಯು ಹಿರಿಯ ವಯಸ್ಕರಲ್ಲಿ ಮೆದುಳಿಗೆ ಹಾನಿ ಉಂಟು ಮಾಡುವ ಪ್ರಮುಖ ಕಾರಣ.  ನಿಮ್ಮ ತಲೆಯ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಿ.  ಬೀಳುವುದನ್ನು ತಪ್ಪಿಸಿಕೊಳ್ಳಲು, ನಿತ್ಯವೂ ವ್ಯಾಯಾಮ ಮಾಡಿ, ಮತ್ತು ದೇಹದ ಸಮತೋಲನವನ್ನು ಉತ್ತಮಪಡಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಇರುವ ಅಪಾಯ ಪೂರಕ ಅಂಶಗಳನ್ನು ನಿವಾರಿಸಿಕೊಳ್ಳಿ – ಅಂದರೆ ನೆಲದಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು… ಇತ್ಯಾದಿ.  ಬೆಳಕಿನ ವ್ಯವಸ್ಥೆ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಾರಿನಲ್ಲಿ ಸೀಟ್‌ ಬೆಲ್ಟ್ ಅನ್ನು ಧರಿಸಿ.  ನೀವು ಅಷ್ಟೊಂದು ಸ್ವಸ್ಥರಿಲ್ಲದಾಗ , ಕತ್ತಲೆಯ  ಸಮಯದಲ್ಲಿ ಅಥವಾ ವಾತಾವರಣ ಉತ್ತಮವಿಲ್ಲದಿರುವಾಗ ನೀವೇ ಸ್ವತ: ಕಾರು ಚಲಾಯಿಸದೆ, ಕಾರು ಚಲಾಯಿಸುವಂತೆ ಇನ್ನೊಬ್ಬರಲ್ಲಿ ಕೇಳಿ.  ಬೈಕ್‌ ಚಲಾಯಿಸುತ್ತಿರುವಿರಾದರೆ, ಹೆಲ್ಮೆಟ್‌ ಅನ್ನು ಧರಿಸಿ. ಉತ್ತಮ ಬೆಳಕಿರುವ, ಸಮತಟ್ಟಾದ ಜಾಗದಲ್ಲಿ, ಸರಿಯಾಗಿ ಹೊಂದಾಣಿಕೆಯಾಗುವ ಶೂಗಳನ್ನು ಧರಿಸಿ – ನಡಿಗೆ ಅಥವಾ ಓಟದಲ್ಲಿ ತೊಡಗಿ. ನಿಮ್ಮ ದೇಹವು ಅಷ್ಟೊಂದು ಸಮತೋಲನದಲ್ಲಿಲ್ಲ  ಎಂದು ಅನ್ನಿಸುತ್ತಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ನಿಮ್ಮ ವೈದ್ಯರಲ್ಲಿ ಮಾತನಾಡಿ.

ಸಾಮಾಜಿಕ ಸಂಪರ್ಕದಲ್ಲಿರಿ:

ನಾವು ನಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೊದ್ಯೋಗಿ ಗಳಿಂದ ಪಡೆಯುವ ಬೆಂಬಲವು, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆೆ. ಸಾಮಾಜಿಕವಾಗಿ ಏಕಾಂಗಿಯಾಗಿರುವವರಿಗಿಂತಲೂ, ಕುಟುಂಬ ಹಾಗೂ ಸಮಾಜದ ಸಂಪರ್ಕದಲ್ಲಿರುವವರಿಗೆ ಆಲ್ಜೀಮರ್ಸ್‌ ಕಾಯಿಲೆಯ ಅಪಾಯ ಕಡಿಮೆ ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ.  ಹಾಗಾಗಿ, ನಿಮ್ಮ ವಯಸ್ಸು ಹೆಚ್ಚುತ್ತಾ ಹೋದಂತೆ, ಸಾಮಾಜಿಕ ಸಂಪರ್ಕವನ್ನೂ ಸಹ ಹೆಚ್ಚಿಸಿಕೊಳ್ಳಿ.  ಬುಕ್‌ ಕ್ಲಬ್‌ ಅಥವಾ ಸ್ವಯಂ ಸೇವಕರ ಗುಂಪಿಗೆ ಸೇರಿಕೊಳ್ಳಿ, ನಿಮ್ಮ ಸುತ್ತಣ ಜಗತ್ತಿನ ಜತೆಗೆ ಸಂವಹನವನ್ನು ಬೆಳೆಸಿಕೊಳ್ಳಿ.

ಯೋಚನೆ ಸಕಾರಾತ್ಮಕವಾಗಿರಲಿ: ಸಕಾರಾತ್ಮಕ ಯೋಚನೆ ಮತ್ತು ಭಾವನೆಗಳು ಆರೋಗ್ಯಕರ ಮನಸ್ಸು ಮತ್ತು ದೇಹಕ್ಕೆ ಪೂರಕ ಅಂಶಗಳು.  ಜಗತ್ತಿನಲ್ಲಿರುವ ಒಳ್ಳೆಯತನ ಮತ್ತು ಒಳ್ಳೆಯ ವಿಚಾರಗಳು, ನಿಮಗೆ ಒಳ್ಳೆಯದನ್ನು ಮಾಡುವ ಮತ್ತು ಒಳ್ಳೆಯ ಆನಂದವನ್ನು ನೀಡುವ ವ್ಯಕ್ತಿಗಳ ಬಗ್ಗೆ ನಿಮ್ಮ ಗಮನರಲಿ.

ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಿ:  ಆಧ್ಯಾತ್ಮಿಕ, ತಾತ್ವಿಕ ವಿಚಾರಗಳ ಬಗ್ಗೆ ನಿಮಗೆ ಆಸಕ್ತಿ ಇದ್ದಲ್ಲಿ, ಅದನ್ನು ಬೆಳೆಸಿಕೊಳ್ಳುವ ಮೂಲಕ ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವನ್ನು ಉನ್ನತಿಗೊಳಿಸಿಕೊಳ್ಳಬಹುದು. ಕೆಲವು ಹಿರಿಯ ವಯಸ್ಕರಿಗೆ ತಮ್ಮ ಸಮುದಾಯ ಮತ್ತು ಆಚರಣೆಗಳ ಬೆಂಬಲವು ನೆಮ್ಮದಿಯನ್ನು ನೀಡುತ್ತದೆ.  ನಿಮ್ಮ ಧರ್ಮ,  ಆಧ್ಯಾತ್ಮಿಕ ನಂಬುಗೆಗಳು ಯಾವುದೇ ಆಗಿರಲಿ-  ಆಧ್ಯಾತ್ಮಿಕತೆ, ತಾತ್ವಿಕತೆ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಿ.  ಈ ಆಸಕ್ತಿಯು ನಿಮ್ಮಲ್ಲಿ ಖನ್ನತೆ ಉಂಟಾಗುವುದನ್ನು ತಡೆಯಲು ಮತ್ತು ಖನ್ನತೆಯಿಂದ ಹೊರಬರಲು ಸಹಾಯಮಾಡಬಹುದು.  ಮಾತ್ರವಲ್ಲ, ನೆನಪಿನ ಶಕ್ತಿ ಕಡಿಮೆಯಾಗುವುದರ ವಿರುದ್ಧ ನಿಮಗೆ ರಕ್ಷಣೆಯನ್ನೂ ಸಹ ಒದಗಿಸಬಹುದು.   

ನನ್ನ ನೆನಪಿನ ಶಕ್ತಿ ಸಹಜವಾಗಿರಲು ನಾನು ಏನು ಮಾಡಬಹುದು?

ಎಲ್ಲಾ ವಿಚಾರಗಳನ್ನು ನೆನಪಿಟ್ಟುಕೊಳ್ಳುವ ನಿರೀಕ್ಷೆ ಬೇಡ.  ಇಂದಿನ ಜಗತ್ತಿನಲ್ಲಿ ನಾವೆಲ್ಲರೂ ಅನಗತ್ಯ ವಿಚಾರಗಳ ಅತಿ ಭಾರದಿಂದ ಕುಸಿದು ಹೋಗುತ್ತಿದ್ದೇವೆ. ಹಾಗಾಗಿ, ಅಗತ್ಯವಿದ್ದಾಗಲೆಲ್ಲಾ, ಪಟ್ಟಿಗಳು, ಕ್ಯಾಲೆಂಡರ್‌ಗಳು, ನೆನಪೋಲೆಗಳು ಅಥವಾ ರಿಮೈಂಡರ್‌ ಅಥವಾ ನೆನಪಿಸುವ ಇನ್ನಿತರ ಸಾಧನಗಳನ್ನು ಬಳಸಿಕೊಳ್ಳಿ.  ಉದಾಹರಣೆಗೆ:  ಭೇಟಿಯ ವಿಚಾರಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಬರೆದಿಟ್ಟುಕೊಳ್ಳಿ ಮತ್ತು ಸಣ್ಣ ಪುಟ್ಟ ಕೆಲಸಗಳ ಪಟ್ಟಿ ಒಂದು ನಿಮ್ಮ ಜೇಬಿನಲ್ಲಿರಲಿ.

ನಿಮಗೆ ನೆನಪಿಸಲು ಸಾಧ್ಯವಾಗುವಂತೆ ನಿತ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಿ.  ಪ್ರತಿನಿತ್ಯವೂ ಅದೇ ಸಮಯದಲ್ಲಿ ಔಷಧಿಯನ್ನು ತೆಗೆದುಕೊಳ್ಳುವ ರೂಢಿ ಮಾಡಿಕೊಳ್ಳಿ.  ನಿಮ್ಮಲ್ಲಿರುವ ಬೀಗದಕೈ ಇತ್ಯಾದಿಗಳನ್ನು ಒಂದೇ ಜಾಗದಲ್ಲಿಡಿ.

 ಶ್ರವಣಕ್ಕಿಂತಲೂ ದೃಶ್ಯ ವಿಚಾರಗಳು ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. ಅಂದರೆ, ನಾವು ಕೇಳಿದ ವಿಚಾರಕ್ಕಿಂತಲೂ ನೋಡಿದ ವಿಚಾರವನ್ನು ನೆನಪು ಮಾಡಿಕೊಳ್ಳುವುದು ಸುಲಭ.  ಎರಡೂ ವಿಚಾರಗಳನ್ನು ಒಟ್ಟಿಗೆ ಬಳಸಿಕೊಳ್ಳುವುದರಿಂದ ನೆನಪನ್ನು ಹೆಚ್ಚಿಸಿಕೊಳ್ಳಬಹುದು. 

 ಹೊಸ ವಿಚಾರಗಳು ಮತ್ತು ವಿಷಯಗಳ ಸಂಪರ್ಕದಲ್ಲಿರುವ ಮೂಲಕವೂ ಸಹ ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

 ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳು ವುದರಿಂದ ಕಲಿಕೆ ಮತ್ತು ನೆನಪನ್ನು ಉತ್ತಮಪಡಿಸಿಕೊಳ್ಳಬಹುದು.  ಉದಾಹರಣೆಗೆ, ನೀವು ಯಾವುದಾ ದರೂ ಹೊಸ ವಿಷಯವನ್ನು ಕಲಿಯುವಾಗ ಸದ್ದುಗದ್ದಲಗಳು ಆದಷ್ಟು  ಮಿತಿಯಲ್ಲಿರಲಿ (ನಿಃಶಬ್ದ ಸ್ಥಳವನ್ನು ಆರಿಸಿಕೊಳ್ಳಿ) , ನಿಮ್ಮ ಗಮನವನ್ನು ಕೇಂದ್ರೀಕರಿಸಿ.

 ಕಲಿತ ವಿಚಾರಗಳನ್ನು ನೆನಪಿಸಿಕೊಳ್ಳುವುದರಿಂದಲೂ ಸಹಾಯವಾಗುತ್ತದೆ.  ಅದಕ್ಕಾಗಿ ನೀವೆ ಸ್ವತ: ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಿ ಮತ್ತು ತಾಳ್ಮೆ ಇರಲಿ.

ನಮಗೆ ವಯಸ್ಸು ಹೆಚ್ಚಾಗುತ್ತಾ ಹೋಗುವಾಗ, ಯಾವುದು ಸಹಜ? ಯಾವುದು ಅಸ್ವಸ್ಥತೆಯ ಲಕ್ಷಣವಾಗಿರಬಹುದು?

ವಯಸ್ಸು ಹೆಚ್ಚಾಗುತ್ತಾ ಹೋದಂತೆ ಒಂದು ಮಟ್ಟದಲ್ಲಿ ನೆನಪು ಕಡಿಮೆಯಾಗುವುದು ಸ್ವಾಭಾವಿಕ. ಆದರೆ, ಆಗಾಗ ಮರೆತು ಹೋಗುವುದು ಸ್ವಾಭಾವಿಕ ಅಲ್ಲ.  ವಯಸ್ಸು ಹೆಚ್ಚಾಗುತ್ತಾ ಸಾಗಿದಂತೆ, ನಾವು ಹೆಚ್ಚು ನಷ್ಟವನ್ನು (ಕುಟುಂಬದ ಸದಸ್ಯರು ದೂರವಾಗುವುದು, ಪ್ರೀತಿಪಾತ್ರರ ಅಗಲಿಕೆ) ಮತ್ತು ಹೆಚ್ಚು ದು:ಖವನ್ನು ಅನುಭವಿಸುತ್ತೇವೆ. ಹಾಗಿದ್ದರೂ ಸಹ, ಬಹಳ ಸಮಯ ದು:ಖದಲ್ಲಿ ಅಥವಾ ಖನ್ನತೆಯಲ್ಲಿರುವುದು ವೃದ್ಧಾಪ್ಯದ ಸಹಜ ಲಕ್ಷಣ ಅಲ್ಲ.

ಕೆಳಗೆ ಪಟ್ಟಿ ಮಾಡಲಾದ ಯಾವುದಾದರೂ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ, ಅಥವಾ ನಿಮ್ಮ ಬಂಧುಗಳಲ್ಲಿ , ಸ್ನೇಹಿತರಲ್ಲಿ ಯಾರಿಗಾದರೂ ಈ ಲಕ್ಷಣಗಳಿದ್ದಲ್ಲಿ, ಅದಕ್ಕಾಗಿ ಸೂಕ್ತ ಸಹಾಯವನ್ನು ಪಡೆಯಿರಿ.  ಹಿರಿಯ ವಯಸ್ಕರು,  ತಮ್ಮ ಸ್ನೇಹಿತರು ಅಥವಾ ಪ್ರೀತಿ ಪಾತ್ರರ ಜೊತೆಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆ ಮೇಲೆ ತಮ್ಮ ಕುಟುಂಬದ ವೈದ್ಯರು ಅಥವಾ ಮನ:ಶಾಸ್ತ್ರಜ್ಞರ ಸಹಾಯವನ್ನು ಪಡೆಯಬಹುದು. 

ಎಚ್ಚರಿಕೆಯ ಲಕ್ಷಣಗಳು:

ಮುಂದೆ ಹೇಳುವ ಅಂಶಗಳು ವಯಸ್ಸಾಗುವಿಕೆಯ ಸಹಜ ಲಕ್ಷಣಗಳು ಆಗಿರದೆ, ಯಾವುದೋ ಅಸ್ವಸ್ಥತೆಯನ್ನು ಸೂಚಿಸುತ್ತಿರಬಹುದು.  ಈ ಲಕ್ಷಣಗಳ ಬಗ್ಗೆ ನಿಮ್ಮ ವೈದ್ಯರ ಬಗ್ಗೆ ಚರ್ಚಿಸಿ.

ಎರಡು ವಾರಗಳಿಂದಲೂ ಹೆಚ್ಚುಕಾಲ ಬೇಸರದಿಂದ ಇರುವುದು ಅಥವಾ ಖನ್ನತೆಯ ಮನಸ್ಥಿತಿಯಲ್ಲಿ ಇರುವುದು.

ಅಕಾರಣವಾಗಿ ಅಳುವುದು.

ಈ ಹಿಂದೆ ಸಂತೋಷ ಪಡುತ್ತಿದ್ದ ವಸ್ತುಗಳಿಂದ, ಜನರಿಂದ ಆಸಕ್ತಿ ಅಥವಾ ಆನಂದವನ್ನು ಕಳೆದುಕೊಳ್ಳುವುದು.

ಎದೆ ಡವಗುಟ್ಟುವುದು ಅಥವಾ ಆಯಾಸವಾಗುವುದು,  ಆಲಸ್ಯ, ಸುಸ್ತು ಅಥವಾ ಸಾಮರ್ಥ್ಯ ನಷ್ಟವಾಗುವುದು.

ಕಿರಿಕಿರಿ, ಜಗಳಗಂಟತನ.

ಹಸಿವಿಲ್ಲದಿರುಕೆ ಅಥವಾ ಅತಿಹಸಿವು ಅಥವಾ ದೇಹದ ತೂಕದಲ್ಲಿ ವ್ಯತ್ಯಾಸವಾಗುವಿಕೆ.

ನಿದ್ದೆಯಲ್ಲಾಗುವ ವ್ಯತ್ಯಾಸಗಳು ಅಂದರೆ, ನಿದ್ರಾಹೀನತೆ ಅಥವಾ  ಸಾಮಾನ್ಯಕ್ಕಿಂತ ಹೆಚ್ಚು ನಿದ್ದೆ ಹೋಗುವುದು.

ತಾನು ನಿಷ್ಪ್ರಯೋಜಕ ಎಂಬ ಭಾವನೆ, ಅಕಾರಣ ತಪ್ಪಿತಸ್ಥ ಭಾವನೆ, ಅಸಹಾಯಕತೆ ಅಥವಾ ನಿರಾಶಾಭಾವನೆ.

ಆಲೋಚಿಸುವ, ಏಕಾಗ್ರಗೊಳಿಸುವ ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕುಗ್ಗುವುದು.

ಮತ್ತೆ ಮತ್ತೆ ಆತ್ಮಹತ್ಯೆ ಅಥವಾ ಸಾಯುವ ಆಲೋಚನೆ  ಮರುಕಳಿಸುವುದು, ಆತ್ಮಹತ್ಯಾ ಪ್ರಯತ್ನಗಳು – ತುರ್ತಾಗಿ ತಜ್ಞ ವೈದ್ಯರ ನೆರವನ್ನು ಪಡೆಯಿರಿ.

ನೋವುಗಳು ಮತ್ತು ಯಾತನೆಗಳು ಅಥವಾ ವಿವರಿಸಲಾಗದಂತಹ ಇತರ ದೈಹಿಕ ಸಮಸ್ಯೆಗಳು.

ಗೊಂದಲ ಮತ್ತು ಕಕ್ಕಾಬಿಕ್ಕಿಯಾಗುವುದು.

ಮರೆತು ಹೋಗುವುದು, ಇತ್ತೀಚಿನ ಸಂಗತಿಗಳನ್ನು ಮರೆಯುವುದು, ಅಲ್ಪ$ಕಾಲಿಕ ಮರೆವು.

ಸಾಮಾಜಿಕ ಪರಿತ್ಯಕ್ತತೆ.

ಹಣಕಾಸು, ಸಂಖ್ಯೆಗಳು ಮತ್ತು ಬಿಲ್‌ಗ‌ಳ ಪಾವತಿ, ನಿರ್ವಹಣೆ ಕಷ್ಟವಾಗುವುದು.

ವ್ಯಕ್ತಿತ್ವ ಮತ್ತು ಉಡುಪುಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದು.

ಮನೆ, ವಠಾರದ ನಿರ್ವಹಣೆ ಕಷ್ಟವಾಗುವುದು.

ಯಾವೆಲ್ಲಾ ಕಾರಣಗಳಿಂದ ಮಾನಸಿಕ ಅಸ್ವಸ್ಥತೆ ಬಾಧಿಸಬಹುದು?

ದೈಹಿಕ ವೈಕಲ್ಯ.

ದೈಹಿಕ ಅನಾರೋಗ್ಯ.

ಪರಿಸರದಲ್ಲಿ ಆಗುವ ಬದಲಾವಣೆ, ಅಂದರೆ ಮನೆ ಬದಲಾವಣೆ ಮಾಡುವುದು… ಇತ್ಯಾದಿ

ಪ್ರೀತಿಪಾತ್ರರ ಮರಣ ಅಥವಾ ಕಾಯಿಲೆ.

ಔಷಧೋಪಚಾರಗಳ ಸಂಯೋಜನೆ.

ಹಿರಿಯ ವಯಸ್ಕರು ಇತರರಿಗಿಂತ ಹೆಚ್ಚು ಔಷಧಿಗಳನ್ನು ಸೇವಿಸುತ್ತಿರುತ್ತಾರೆ.  ವಯಸ್ಸು ಹೆಚ್ಚಾದಂತೆ, ನಮ್ಮ ದೇಹದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುವುದರಿಂದಾಗಿ, ವೃದ್ಧರ ಶರೀರದಲ್ಲಿ  ಬಹಳ ಹೊತ್ತು ಔಷಧಿಯು ಉಳಿದು, ಕ್ಷಿಪ್ರವಾಗಿ ನಂಜಾಗುವ ಹಂತವನ್ನು ತಲುಪಬಹುದು. 

ಔಷಧಿಗಳು-ಅಲ್ಕೋಹಾಲ್‌ ಗಳಿಂದ ವ್ಯಕ್ತಿಯಲ್ಲಿ ಗೊಂದಲ, ಮನಸ್ಥಿತಿಯಲ್ಲಿ ವ್ಯತ್ಯಾಸ, ಬುದ್ಧಿಮಾಂದ್ಯತೆಯ ಲಕ್ಷಣಗಳು ಗೋಚರಿಸಬಹುದು.

ಅಲ್ಕೋಹಾಲ್‌ ಅಥವಾ ಮಾದಕ ವಸ್ತು ಸೇವನೆ ಅಥವಾ ದುರ್ಬಳಕೆ.

ಕಳಪೆ ಆಹಾರ.

ಹಲ್ಲುಗಳ ಸಮಸ್ಯೆಯಿಂದಾಗಿ ಆಹಾರದ ಕೊರತೆ ಉಂಟಾಗಬಹುದು.  ಕೆಲವು ವೃದ್ಧರಿಗೆ ಆಹಾರ ನುಂಗಲು ಕಷ್ಟವಾಗುವುದರಿಂದಾಗಿ, ಅವರು ಆಹಾರವನ್ನು ನಿರಾಕರಿಸುತ್ತಾರೆ. 

ಒಂದುವೇಳೆ ನನಗೆ ಸಮಸ್ಯೆ ಇದೆ ಎಂಬ ಸಂದೇಹವಿದ್ದಾಗ ನಾನು ಏನು ಮಾಡಬೇಕು?

ನಿಮ್ಮ ವೈದ್ಯರು ಅಥವಾ ಮನೋವೈದ್ಯರ ಜೊತೆ ಮಾತನಾಡಿ.  ನಿಮಗೆ ಏನು ಅನ್ನಿಸುತ್ತಿದೆ ಮತ್ತು  ನಿಮಗೆ ಯಾವುದು ಸಹಜವಾಗಿಲ್ಲ ಎಂಬುದನ್ನು ವಿವರಿಸಿ.  ನಿಮ್ಮ ನಂಬುಗೆಯ ಸ್ನೇಹಿತರು, ಕುಟುಂಬ ವರ್ಗದವರು ಅಥವಾ ಆಧ್ಯಾತ್ಮಿಕ ಸಮಾಲೋಚಕರ ಜೊತೆಗೆ ಮಾತನಾಡಿ.  ನಾಚಿಕೆ ಅಥವಾ ಮುಜುಗರ ಪಡಬೇಡಿ.  ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ವಿವರಿಸಿ.  ಖನ್ನತೆ ಎಂಬುದು ವಯಸ್ಸಾಗುವಿಕೆಯ ಸಹಜ ಲಕ್ಷಣ ಅಲ್ಲ.  ಹಾಗಿದ್ದರೂ ಸಹ, ಪ್ರಸ್ತುತ ಖನ್ನತೆ ಎಂಬುದು ಅಷ್ಟಾಗಿ ಗಮನವನ್ನೀಯದ ಮತ್ತು ಚಿಕಿತ್ಸೆಗೆ ಒಳಪಡದ ಅಸ್ವಸ್ಥತೆ ಎನಿಸಿದೆ.  ಇತರ ಕಾಯಿಲೆಗಳ ಜತೆಗೆ ಕಾಣಿಸಿಕೊಳ್ಳುವ ಖನ್ನತೆಗೆ ಚಿಕಿತ್ಸೆ ನೀಡಬಹುದು ಮತ್ತು ಚಿಕಿತ್ಸೆ ನೀಡಬೇಕು. ಒಂದು ವೇಳೆ ಖನ್ನತೆಗೆ ಚಿಕಿತ್ಸೆ ನೀಡದೆ ಹೋದರೆ, ಇರುವ ಕಾಯಿಲೆ ಇನ್ನಷ್ಟು ಬಿಗಡಾಯಿಸಬಹುದು ಅಥವಾ ಕಾಯಿಲೆಗೆ ನೀಡುವ  ಚಿಕಿತ್ಸೆ ನಿಷ್ಪ್ರಯೋಜಕವಾಗಬಹುದು.

ನೀವು ಮನೆಯಲ್ಲಿರುವಾಗ ನಿಮಗೇನಾದರೂ ಪ್ರಶ್ನೆಗಳು ಉದ್ಭವವಾದರೆ, ಒಂದು ಸಲ ನಿಮ್ಮ ವೈದ್ಯರಿಗೆ ಕರೆಮಾಡಿ –  ಪರಿಹಾರವನ್ನು ಪಡೆಯಲು ಹಿಂಜರಿಯಬೇಡ
Reference;
ಡಾ| ಆರ್‌. ಕೇಶವ ಪೈ ಕೋಟ, ಮನೋರೋಗಗಳ ಚಿಕಿತ್ಸಾ ವಿಭಾಗ,ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ,ಮಂಗಳೂರು | Feb 09, 2014

SHIVARAJ .N from WordPress

यध्भावां थाथ्भवाथे – यथा धृष्टि थथा श्रुष्टि